ಬಾಲಚಂದ್ರರಾವ್ ಎಂಬುವ ಒಬ್ಬ ಸಜ್ಜನರು ಒಂದು ದಿನ ಬಲಗಣ್ಣಿಗೆ ಒಮ್ಮೆಲೆ ಕತ್ತಲು ಕವಿದಿದೆ ಎಂದು ಗಾಬರಿಯಲ್ಲಿ ನೇತ್ರತಜ್ಞರಲ್ಲಿಗೆ ಬಂದರು. ಅವರಿಗೆ ಒಂದು ತಿಂಗಳಿಂದ ಬಲಗಣ್ಣು ಸ್ವಲ್ಪ ಕಡಿಮೆ ಕಾಣುತ್ತಿದ್ದು, ಹಿಂದಿನ ರಾತ್ರಿಯಿಂದ ತೀರ ಕಡಿಮೆಯಾಗಿತ್ತು. ಅವರಿಗೆ ಎಂಟು ವರ್ಷದಿಂದ ಮಧುಮೇಹವೂ, ಆರು ತಿಂಗಳಿಂದ ಬಿಪಿ ಕಾಯಿಲೆಯೂ ಇತ್ತು.
ನಾಲ್ಕು ವರ್ಷಗಳ ಹಿಂದೆ ಕಣ್ಣು ಕಡಿಮೆ ಕಾಣಹತ್ತಿದಾಗ ಎರಡೂ ಕಣ್ಣುಗಳಲ್ಲಿಯೂ ಪೊರೆ ಬಂದಿದೆಯೆಂದು ನೇತ್ರತಜ್ಞರಿಂದ ಗೊತ್ತಾಯಿತು. ಶಸ್ತ್ರಚಿಕಿತ್ಸೆ ಆಗುವ ಮಟ್ಟಿಗಷ್ಟೆ ಸಕ್ಕರೆ ಕಾಯಿಲೆಯನ್ನು ತ್ವರಿತವಾಗಿ ಹತೋಟಿಗೆ ತಂದ ಇವರು ಎರಡೂ ಕಣ್ಣುಗಳ ಪೊರೆ ಆಪರೇಷನ್ ಮಾಡಿಸಿಕೊಂಡು ಬಂದರು.
ಆಗಿನಿಂದ ದೃಷ್ಟಿ ಚೆನ್ನಾಗಿದ್ದು, ಇವರು ಇನ್ನೊಮ್ಮೆ ನೇತ್ರತಪಾಸಣೆಗೂ ಹೋಗಲಿಲ್ಲ, ಹೇಗೂ ಆಪರೇಷನ್ ಆಯ್ತಲ್ಲ ಎಂದು ಮಧುಮೇಹವನ್ನು ಹತೋಟಿಯಲ್ಲಿ ಇಡಬೇಕೆಂಬ ಗೋಜಿಗೂ ಹೋಗಲಿಲ್ಲ. ಇದೇ ಇವರು ಮಾಡಿದ ಎರಡು ದೊಡ್ಡ ಪ್ರಮಾದಗಳು.
ಈಗ ಪರೀಕ್ಷೆ ಮಾಡಿದ ವೈದ್ಯರು ಇವರ ಎರಡೂ ಕಣ್ಣುಗಳಿಗೂ ಮಧುಮೇಹದಿಂದಾಗಿ ಡಯಾಬಿಟಿಕ್ ರೆಟಿನೋಪಥಿ ಎಂಬ ಕಾಯಿಲೆ ಬಂದಿದೆ ಎಂದೂ, ಇದು ಬಲಗಣ್ಣಿನಲ್ಲಿ ಬಹಳ ಮುಂದುವರೆದಿದ್ದು, ಅದರಿಂದ ದೃಷ್ಟಿ ಹೋಗಿರುವುದಾಗಿ ತಿಳಿಸಿದರು. ಇವರ ನಿರ್ಲಕ್ಷ್ಯ ಧೋರಣೆಯೇ ಇವರ ಕಣ್ಣಿನ ಸ್ಥಿತಿ ಈ ಮಟ್ಟಕ್ಕೆ ಬಂದು ನಿಲ್ಲುವುದಕ್ಕೆ ಕಾರಣವಾಯಿತು.
ಎರಡು ಶಸ್ತ್ರಚಿಕಿತ್ಸೆಗಳ ನಂತರ ಇವರ ದೃಷ್ಟಿ ಸುಧಾರಿಸಿತು; ಜಾಗೃತರಾದ ಇವರು ನಿಯಮಿತವಾಗಿ ನೇತ್ರತಪಾಸಣೆಗೆ ಬರ ಹತ್ತಿದರು.
ಮಧುಮೇಹದಂತಹ ಸಾಮಾನ್ಯ ಕಾಯಿಲೆಯಿಂದ ಅಂಧತ್ವವೇ?
ನಾವು ನೋಡುವ ದೃಶ್ಯ ಕಣ್ಣಿನ ಪಾರದರ್ಶಕ ಮುಂಭಾಗದಿಂದ ಹಾದು ಕಣ್ಣಿನ ಹಿಂಭಾಗದಲ್ಲಿರುವ ಅಕ್ಷಿಪಟಲ(Retina) ದ ಮೇಲೆ ಬೀಳುತ್ತದೆ. ಈ ಪರದೆಯಂತಹ ಅಕ್ಷಿಪಟಲದಿಂದಲೇ ದೃಷ್ಟಿಯ ನರ ಶುರುವಾಗಿ ನಾವು ನೋಡುವ ದೃಶ್ಯದ ಮಾಹಿತಿಯು ಮಿದುಳಿಗೆ ಹೋಗಿ ತಲುಪುತ್ತದೆ.
ಈ ಅಕ್ಷಿಪಟಲ ಮಿದುಳಿಗಿಂತಲೂ ಸಕ್ರಿಯವಾಗಿದ್ದು, ಅವಶ್ಯಕ ಪೋಷಕಾಂಶ ಹಾಗೂ ಆಮ್ಲಜನಕವನ್ನು ಇದರಲ್ಲಿ ಹರಿಯುವ ರಕ್ತನಾಳಗಳ ಮೂಲಕ ಪಡೆಯುತ್ತದೆ. ಈ ರಕ್ತನಾಳಗಳೇ ಮಧುಮೇಹದಿಂದಾಗಿ ಬಾಧೆಗೊಳಗಾಗುವ ಅಂಗಾಂಶಗಳು. ಮಧುಮೇಹದಿಂದಾಗಿ ಈ ರಕ್ತನಾಳ ಹಾಗೂ ಅಕ್ಷಿಪಟಲಕ್ಕೆ ಉಂಟಾಗುವ ಕಾಯಿಲೆಗೆ “ಡಯಾಬಿಟಿಕ್ ರೆಟಿನೋಪಥಿ' ಎನ್ನುವರು.
ಪ್ರಾರಂಭಿಕ ಹಂತದಲ್ಲಿ ಅತೀ ಸೂಕ್ಷ್ಮವಾದ ರಕ್ತನಾಳಗಳು ದುರ್ಬಲವಾಗಿ ಅಲ್ಲಲ್ಲಿ ಬಲೂನಿನಂತೆ ಬಾತುಕೊಳ್ಳುತ್ತವೆ. ಇವು ಒಡೆದು ಚುಕ್ಕೆ ಆಕಾರದ ರಕ್ತಸ್ರಾವವಾಗಬಹುದು. ಈ ರಕ್ತನಾಳಗಳಿಂದ ರಕ್ತದಲ್ಲಿನ ನೀರಿನಂಶ ಹೊರ ಹರಿದು ಅಕ್ಷಿಪಟಲದಲ್ಲಿ ಬಾವು ಕಾಣಿಸಿಕೊಳ್ಳಬಹುದು.
ಹೀಗೇ ಘಾಸಿಗೊಳ್ಳುತ್ತ ಹೋದ ರಕ್ತನಾಳಗಳಲ್ಲಿ ರಕ್ತ ಪರಿಚಲನೆ ಸರಾಗವಾಗಿ ಆಗದೇ, ರೆಟಿನಾ ಪೋಷಕಾಂಶ ಹಾಗೂ ಆಮ್ಲಜನಕದಿಂದ ವಂಚಿತವಾಗುತ್ತದೆ. ಇದರಿಂದ ಹೊಸ ರಕ್ತನಾಳಗಳು ಹುಟ್ಟಿಕೊಳ್ಳಲು ಪ್ರೇರಣೆ ಸಿಗುತ್ತದೆ.
ಈ ಹೊಸ ರಕ್ತನಾಳಗಳಿಂದ ಉಪಯೋಗಕ್ಕಿಂತ ಹಾನಿಯೇ ಹೆಚ್ಚು. ನಾಜೂಕಾಗಿರುವುದರಿಂದ ಈ ರಕ್ತನಾಳಗಳು ಸುಲಭವಾಗಿ ಒಡೆದು ಕಣ್ಣುಗುಡ್ಡೆಯ ತುಂಬ ರಕ್ತಸ್ರಾವ ಉಂಟು ಮಾಡಬಹುದು. ಇವು ಸಪಾಟಾಗಿ ಬೆಳೆಯದೆ ಬಲೆಯಂತೆ ಗೊತ್ತುಗುರಿಯಿಲ್ಲದೆ ಬೆಳೆಯಲು ತೊಡಗುತ್ತವೆ. ಇವುಗಳಿಗೆ ಕುಗ್ಗುವ ಕ್ಷಮತೆಯಿದ್ದು, ಹೀಗಾಗುವಾಗ ಅವು ಅಕ್ಷಿಪಟಲವನ್ನು ಎಳೆದು ಹಿಡಿದು ಅದು ಕಿತ್ತು ಬರುವಂತೆ ಮಾಡಬಹುದು. ಇದೇ ನಮ್ಮ ಬಾಲಚಂದ್ರ ರಾವ್ ಅವರಿಗೆ ಆಗಿದ್ದು. ಈ ಎಲ್ಲ ಬದಲಾವಣೆಗಳು ಮಧುಮೇಹಿಗಳಲ್ಲಿ ಆಗಲು ಹಲವಾರು ವರ್ಷಗಳೇ ಬೇಕು. ಆದರೆ ರಕ್ತದ ಸಕ್ಕರೆ ಅಂಶ ಹತೋಟಿಯಲ್ಲಿ ಇರದವರಲ್ಲಿ, ಅತಿರಕ್ತದೊತ್ತಡ ಇರುವವರಲ್ಲಿ, ದೇಹದ ತೂಕ ಅಧಿಕವಾಗಿರುವವರಲ್ಲಿ, ಈ ಬದಲಾವಣೆಗಳು ತೀವ್ರ ಗತಿಯಲ್ಲಿ ಆಗಬಹುದು.
ಮಧುಮೇಹದಿಂದಾಗಿ ದೇಹದ ಇತರ ಭಾಗಗಳ ರಕ್ತನಾಳಗಳಿಗೂ ಬಾಧೆಯಾಗುತ್ತವೆ. ಇದಕ್ಕೆ ಕಣ್ಣಿನ ರಕ್ತನಾಳಗಳೇ ಕೈಗನ್ನಡಿ. ಏಕೆಂದರೆ ಈ ಬದಲಾವಣೆಗಳನ್ನು ನೇತ್ರತಜ್ಞರು ಪ್ರತ್ಯಕ್ಷವಾಗಿ ನೋಡಿ ಗುರುತಿಸಬಹುದು.
ಡಯಾಬಿಟಿಕ್ ರೆಟಿನೋಪಥಿ ಶುರುವಾದ ಕೂಡಲೇ ದೃಷ್ಟಿ ಕಡಿಮೆಯಾಗುವುದಿಲ್ಲ. ಹಂತಹಂತವಾಗಿ ಮುಂದುವರಿದಾಗಲೇ ವ್ಯಕ್ತಿಗೆ ದೃಷ್ಟಿಯಲ್ಲಿ ವ್ಯತ್ಯಾಸ ಕಾಣಿಸಬಹುದು ಅಥವಾ ತೀವ್ರ ರಕ್ತಸ್ರಾವವಾದಾಗ ಹಾಗೂ ಅಕ್ಷಿಪಟಲ ಕಿತ್ತುಬಂದಾಗ ಯಾವುದೇ ಸೂಚನೆ ಇಲ್ಲದೆ ಏಕಾಏಕಿ ದೃಷ್ಟಿ ಹೋಗಿ ಬಿಡಬಹುದು.
ಆದ್ದರಿಂದ ಇದು ಶುರುವಾಗಿದೆಯೇ ಎಂದು ಪತ್ತೆ ಹಚ್ಚಿ, ದೃಷ್ಟಿ ಕಾಪಾಡಲು ಸೂಕ್ತ ಚಿಕಿತ್ಸೆ ಕೊಡವ ಜವಾಬ್ದಾರಿಯನ್ನು ನಿಮ್ಮ ಕಣ್ಣಿನ ವೈದ್ಯರಿಗೆ ವಹಿಸುವುದು ಒಳಿತು.
ಅದಕ್ಕಾಗಿ ಪ್ರತಿಯೊಬ್ಬ ಮಧುಮೇಹಿಯೂ 6 ತಿಂಗಳಿಗೊಮ್ಮೆ ನೇತ್ರತಪಾಸಣೆ ಮಾಡಿಸಿಕೊಂಡು ಬರಬೇಕು. ಇದರ ಬಗ್ಗೆ ಜಾಗೃತಿ ಮೂಡಿಸಿ, ನೇತ್ರತಪಾಸಣೆಗೊಳಗಾಗಲು ಪ್ರೇರೆಪಿಸುವುದು ಮಧುಮೇಹಕ್ಕೆ ಚಿಕಿತ್ಸೆ ಕೊಡುವ ನಮ್ಮ ವೈದ್ಯ ಮಿತ್ರರ ಹೊಣೆಯೂ ಹೌದು. ಅವರ ಬಳಿ ನಿಯಮಿತವಾಗಿ ಹೋಗಿ, ಅವರು ಕೊಟ್ಟ ಸೂಚನೆಗಳನ್ನು ಪಾಲಿಸಿ ಅವರಿಂದ ಪಡೆದ ಔಷಧಿಯನ್ನು ಬಿಡದೇ ಬಳಸಿ, ರಕ್ತದ ಸಕ್ಕರೆ ಅಂಶವನ್ನು ಸದಾ ಹತೋಟಿಯಲ್ಲಿಡುವುದು ನಿಮ್ಮ ಜವಾಬ್ದಾರಿ.
ಕೆಲವೊಮ್ಮೆ ಸುಮ್ಮನೆ ನೇತ್ರತಪಾಸಣೆಗೆಂದು ಬಂದವರಲ್ಲಿ ನೇತ್ರತಜ್ಞರು ಡಯಾಬಿಟಿಕ್ ರೆಟಿನೋಪಥಿ ಇರುವುದು ಕಂಡಾಗಲೇ ಇವರಿಗೆ ಸಕ್ಕರೆ ಕಾಯಿಲೆ ಇರುವುದು ಗೊತ್ತಾಗುವುದು!
ಡಯಾಬಿಟಿಕ್ ರೆಟಿನೋಪಥಿ ಪತ್ತೆಯಾದ ಮೇಲೆ ಏನು?
ಆರಂಭಿಕ ಹಂತದಲ್ಲಿ ಯಾವುದೇ ಚಿಕಿತ್ಸೆಯ ಅವಶ್ಯಕತೆ ಇಲ್ಲ. ಔಷಧೊಪಚಾರದಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಹತೋಟಿಯಲ್ಲಿಡುವುದು, ಆಹಾರದಲ್ಲಿ ಪಥ್ಯೆ ಮಾಡುವುದು, ವ್ಯಾಯಾಮ ಇತ್ಯಾದಿ ಮಧುಮೇಹಿಗಳು ಸದಾ ಪಾಲಿಸಬೇಕಾದ ಸೂತ್ರಗಳಿಂದ ಇದು ತೀವ್ರಗತಿಯಲ್ಲಿ ಮುಂದುವರೆಯುದನ್ನು ತಡೆಯಬಹುದು.
ರೆಟಿನಾದಲ್ಲಿ ದೃಷ್ಟಿ ಕಡಿಮೆ ಆಗುವಂಥ ಬಾವು ಕಾಣಿಸಿಕೊಂಡರೆ ಅದು ಇಳಿಯುವವರೆಗೆ ಕಣ್ಣಿನ ಒಳಗಡೆ ಸೂಜಿ ಮದ್ದನ್ನು ಕೊಡಬೇಕಾಗುತ್ತದೆ.
ಹೊಸ ರಕ್ತನಾಳಗಳು ಪತ್ತೆಯಾದ ಕೂಡಲೇ ಅಕ್ಷಿಪಟಲಕ್ಕೆ ಲೇಸರ್ ಚಿಕಿತ್ಸೆ ಕೊಟ್ಟರೆ, ಇವು ಮುದುರಿಹೋಗಿ ಮುಂದೆ ಹಾನಿ ಮಾಡದಂತಾಗುತ್ತವೆ. ಇದು 1 ರಿಂದ ನಾಲ್ಕು ಸಲ ಬೇಕಾಗುವ 10 ನಿಮಿಷದ ಸರಳ ನೋವುರಹಿತ ಚಿಕಿತ್ಸೆ.
ತೀವ್ರ ರಕ್ತಸ್ರಾವವಾದಾಗ / ಅಕ್ಷಿಪಟಲ ಕಿತ್ತುಬಂದಾಗ ಅಕ್ಷಿಪಟಲ ತಜ್ಞರೇ ಮಾಡಬೇಕಾದಂತಹ ಸೂಕ್ಷ್ಮ ಹಾಗೂ ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆ ಬೇಕಾಗುತ್ತದೆ.
ಮುಂದುವರೆದ ಹಂತಗಳಲ್ಲಿಯೂ ಸೂಕ್ತವಾದ ಚಿಕಿತ್ಸೆ ಲಭ್ಯವಿದ್ದರೂ, ರೋಗವು ದೃಷ್ಟಿ ದೋಷ ತಂದು, ಶಸ್ತ್ರಚಿಕಿತ್ಸೆ ಬೇಕಾಗುವ ಹಂತಕ್ಕೆ ತಲುಪುವ ಮುಂಚೆ ಪತ್ತೆ ಹಚ್ಚಿ ತಡೆಹಿಡಿಯುವುದು ಒಳಿತು (Prevention is better than cure).
ಡಾ|| ಅಶ್ವಿನಿ ಕುಲಕರ್ಣಿ
ನೇತ್ರ ತಜ್ಞರು
ಬಳ್ಳಾರಿ
Diabetic? Protect your eyesight.
Book a retina check with our eye specialist at Agastya Hospitals, Ballari.